Wednesday 27 November 2013

ಬಾಲ್ಯದ ಭೂತ .. !!

ಬಾಲ್ಯದ ಭೂತ .. !!

ಕಥೆಯನ್ನು ಬರೆಯಲು ವಿಭಿನ್ನ ವಿಚಾರಗಳ ಚಿಂತನೆಯಲ್ಲಿರುವಾಗ ನೆನಪಾದದ್ದು ನನ್ನ ಬಾಲ್ಯದ ಕೆಲವು ಕ್ಷಣಗಳು .. ಅದಕ್ಕೆ ಕೆಲವು ದಿನಗಳು ಅದರ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡುತ್ತಾ ನೆನಪಾದ ಕೆಲವು ಸಣ್ಣ ಸಣ್ಣ ಘಟನೆಗಳನ್ನು ಒಂದುಗೂಡಿಸಿ ಕಥೆಯೊಂದನ್ನು ಕಟ್ಟುವ ಪ್ರಯತ್ನ.. ಈ ಕಥೆಯು ನನ್ನ ಬಾಲ್ಯದ ನೆನಪುಗಳಲ್ಲಿ ಒಂದು ವಿಶೇಷ ಪುಟವಾಗಿದೆ .. ಇದು ನಾನು ಹುಬ್ಬಳ್ಳಿಯ ಸರ್ಕಾರಿ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ಇದ್ದಾಗ ನಡೆದದ್ದು .. ಆ ವರ್ಷದಲ್ಲೇ ಅಲ್ಲಿ ಅನೇಕ ಬಗೆಯ ವಿಚಾರಗಳ ಹೊಸ ಪರಿಚಯ .. ಅದಕ್ಕೂ ಮೊದಲು ಐದನೇಯ ತರಗತಿಯವರೆಗೂ ಚಿತ್ರದುರ್ಗದಲ್ಲಿ ನನ್ನ ಬಾಲ್ಯದ ದಿನಗಳನ್ನು ಅನುಭವಿಸಿದ್ದೇನೆ .. ಆದರೆ ಚಿತ್ರದುರ್ಗದಲ್ಲಿ ಕಂಡಿದ್ದ , ಕಲಿಯುತ್ತಿದ್ದ ವಾತಾವರಣ , ದುರ್ಗದ ಕೋಟೆ ಹಾಗೂ ಇನ್ನೂ ಅನೇಕ ವಿಚಾರಗಳ ಪರಿಚಯ ಕಥೆಯ ನಡುವಲ್ಲಿ ಹೇಳುತ್ತೇನೆ..  ಅದಕ್ಕೂ ಮೊದಲು ಹುಬ್ಬಳ್ಳಿಯ ನೆನಪುಗಳ ಜೊತೆಯಲ್ಲಿ ಕಥೆಯನ್ನು ಆರಂಭಿಸುತ್ತಿರುವ ಉದ್ದೇಶವೇನೆಂದರೆ ಕಥೆಯ ಮುಖ್ಯ ಪಾತ್ರವೆಂದರೆ ನನ್ನ ಪಾತ್ರ .. ಜಗತ್ತಿನ ವಿಭಿನ್ನತೆಯ ವಿಚಿತ್ರವೆನ್ನಿಸುವ ವಿಚಾರಗಳ ಪರಿಚಯವಾದ ದಿನಗಳು .. ಆ ದಿನಗಳನ್ನು ನಾನು ಈಗ ನೆನೆದಾಗ ನೆನಪಿನಲ್ಲಿ ಉಳಿದದ್ದು ನೂರಕ್ಕೆ ನಾಲ್ಕಿರಬಹುದಾದರೂ ದೆವ್ವಗಳು ಭೂತಗಳು ಎನ್ನುವುದರ ಮಾನಸಿಕ ಒತ್ತಡ ಮತ್ತು ಕುತೂಹಲ ಉಂಟಾಗಿದ್ದು ಆ ವರ್ಷದಲ್ಲೇ ಅತೀ ಹೆಚ್ಚು .. ಮತ್ತು ಯಾವುದೋ ಒಂದು ಪಾತ್ರವನ್ನು ಕಲ್ಪನೆ ಮಾಡಿಕೊಂಡು ಬರೆಯುವುದಕ್ಕಿಂದ ಬಾಲ್ಯದ ನನ್ನ ಪಾತ್ರಕ್ಕೆ ಒಂದಷ್ಟು ಬಣ್ಣಗಳ ಹಚ್ಚಿಟ್ಟು ಓದುಗರ ಕುತೂಹಲ ಮತ್ತು ಅವರ ಬಾಲ್ಯದ ನೆನಪುಗಳಲ್ಲಿ ನನ್ನನ್ನು ಹುಡುಕುವ ಪುಟ್ಟದಾದ ಪ್ರಯತ್ನ.. ಇಲ್ಲಿ ಘಟನೆಗಳ ಸಮಯ, ವಸ್ತು, ಸ್ಥಳ ಹಾಗೂ ವ್ಯಕ್ತಿಗಳ ಪರಿಚಯದಲ್ಲಿ ಒಂದಷ್ಟು ಅದಲು ಬದಲಾಗುವ ಸಾಧ್ಯತೆಗಳು ಇವೆ .. ಕಾರಣ ಆ ದಿನಗಳ ಸಂಪೂರ್ಣ ನೆನಪುಗಳು ಇಲ್ಲದಿರುವುದು .. ಹಾಗಾಗಿ ಇಲ್ಲಿ ಪಾತ್ರಗಳ ಹೆಸರುಗಳು ಮಾತ್ರ ಕಾಲ್ಪನಿಕವಷ್ಟೇ .. ಘಟನೆಗಳು ಎಲ್ಲವೂ ಬಾಲ್ಯದ ಅನುಭವಗಳು ಎನ್ನುವುದಂತೂ  ಸತ್ಯ .. !!

ಕಥೆಯನ್ನು ಪ್ರಾರಂಭಿಸುತ್ತ , ಬಾಲ್ಯದ ಆಟಗಲ್ಲಿ ಅನುಭವಿಸಿದ ವಿಚಿತ್ರ ಕ್ಷಣಗಳ ನೆನಪುಗಳು .. ದೆವ್ವ ಭೂತಗಳ ಬಗೆಗಿನ ಕೆಲವು ಅನುಮಾನಾಸ್ಪದ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರ ಹುಡುಕುವ ಯತ್ನದಲ್ಲಿ ಬದಲಾದ ಬದುಕಿನ ಆಲೋಚನೆಗಳು ..  ಮೊದಲ ಬಾರಿ ಭಯ ಹುಟ್ಟಿಸಿದ್ದ ಫುಟ್ಬಾಲ್ ಆಟ .. ಚೆಂಡಾಟ ಅಂತಾನೂ ಹೇಳಬಹುದು .. ಈ ಆಟದಲ್ಲಿ ಚಿಕ್ಕದಾಗಿ ಮನದಲ್ಲಿ ಚಿಗುರೊಡೆದ ಒಂದು ರೀತಿಯ ಭಯ ಅನ್ನಬಹುದು ಅಥವಾ ಹೊಸತನ್ನು ಕಲಿಯುವ ಹುಚ್ಚು ಕುತೂಹಲ ಅಂತಲೂ ಹೇಳಬಹುದು.. ಒಟ್ಟಿನಲ್ಲಿ ಕಥೆಯನ್ನು ಓದಲು ತೊಂದರೆಯಾಗದಿರಲೆಂದು ಕೆಲವು ಭಾಗಗಳಲ್ಲಿ ವಿಂಗಡಿಸಿ ನಿಮ್ಮೆಲ್ಲರ ಮುಂದಿಡುತ್ತೇನೆ .. !!

ಆಗಷ್ಟೇ ನಾನು ಹುಬ್ಬಳಿಯ ಸರ್ಕಾರಿ ಶಾಲೆಯಲ್ಲಿ ಸೇರಿಕೊಂಡು ಒಂದೆರಡು ದಿನಗಳು ಆಗಿತ್ತು .. ಇಂಗ್ಲೀಷ್ ಮೇಷ್ಟ್ರು ಆ ದಿನ ರಜಾ .. ಹಾಗಾಗಿ ಆಡಲು ಬಿಟ್ಟರು .. ಎಲ್ಲಾ ಹುಡುಗರು ಫುಟ್ಬಾಲ್ (ಆಗ ಅಲ್ಲಿ ಅದಕ್ಕೆ ಚೆಂಡಾಟ ಅನ್ನುತ್ತಿದ್ದರು) ಆಡಲು ಹೋದರು .. ಹುಡುಗಿಯರು ಕೆಲವು ಗುಂಪುಗಳಲ್ಲಿ ಬೇರೆ ಬೇರೆ ಆಟವಾಡಲು ಹೋದರು .. ಹೊಸಾ ವಾತಾವರಣ & ಯಾರ ಪರಿಚಯವೂ ಹೆಚ್ಚಾಗಿ ಇಲ್ಲದ ಕಾರಣ ನಾನು ಸುಮ್ಮನೇ ಅವರ ಆಟವನ್ನು ನೋಡುತ್ತಾ ನಿಂತಿದ್ದೆ .. ಒಬ್ಬ ಹುಡುಗ ಬಿದ್ದು ಕಾಲಿಗೆ ಹೆಚ್ಚು ಪೆಟ್ಟಾಗಿ ರಕ್ತ ಸುರಿಯಲು ಶುರುವಾಯಿತು .. ಆಗ ಅವನ ಬದಲು ನನ್ನನ್ನು ಆಡಲು ಕರೆದರು .. ಆಗಲೇ ಎಲ್ಲರ ಪರಿಚಯ ಹೆಚ್ಚಾಗಿ ಆದದ್ದು .. ಆ ವಿಚಾರ ಆಮೇಲೆ ಹೇಳುವೆ .. ಅದರಲ್ಲಿ ಒಬ್ಬ ನನ್ನನ್ನು ಗೋಲೀ ಹತ್ರ ಹೋಗಿ ನಿಂದ್ರು  ಅಂದಾ ... ನಾನೂ ಕೂಡ ಅಲ್ಲೆಲ್ಲಾ ಹುಡುಕಾಡಿದೆ ಅಲ್ಯಾವುದೇ ಗೋಲಿ ಕಾಣಲಿಲ್ಲ .. ಆಗ ಅವನು ನನ್ನ ಬಳಿ ಓಡಿ ಬಂದು ಗೆರೆಗಳನ್ನು ಹಾಕಿದ್ದ ಜಾಗ ತೋರಿಸಿ ಇಲ್ಲೇ ನಿಂದ್ರು ನಿನ್ ಕಡಿ ಚೆಂಡು ಬಂದ್ರ ಹಿಡಿಬೇಕು ಗೊತ್ತಲ್ಲಾ ಆಟ .. ಟೀವ್ಯಾಗ ನೋಡಿಲ್ವಾ ಅಂತಂದ ಅವನು .. ನಾನು ಆಗ ಓಹೋ ನಾನು ಗೋಲ್ ಕೀಪರ್ ಹಾಗಿದ್ರೆ ಅರ್ಥವಾಯಿತು ಇಲ್ಲಿ ನೀನು ಗೋಲಿ ಅಂದಾಗ ಆಡುವ ಗಾಜಿನ ಗೋಲಿ ಹುಡುಕ್ತಾ ಇದ್ದೆ .. ಈಗ ಎಲ್ಲಾ ಸರಿ ಅರ್ಥವಾಯಿತು.. ನಮ್ಮ ಚಿತ್ರದುರ್ಗದಲ್ಲಿ ಗೋಲ್ ಕಂಬಗಳು ಇರುತ್ತಿದ್ದವು ... ಬಹು ದೊಡ್ಡ ಮೈದಾನದಲ್ಲಿ ಆಡಿದ್ದೀನಿ ಫುಟ್ಬಾಲ್ ಆಟ ಗೊತ್ತು ಹೋಗು ಆಟ ಶುರು ಮಾಡು ಎಂದು ಹೇಳಿದೆ .. ಆಟ ಶುರುವಾಯಿತು .. ಚಿಕ್ಕದಾದ ಮೈದಾನದಲ್ಲಿ ನಡುವಲ್ಲಿ ಎಲ್ಲಾ ಹುಡುಗರು ಓಡುತ್ತಾ ಏನನ್ನೋ ಒದೆಯುತ್ತಿದ್ದರು .. ನಾನು ಗೋಲ್ ಕೀಪರ್ ಆಗಿ ಸುಮ್ಮನೇ ನಿಂತಿದ್ದೆ ... ಎದುರಿನಲ್ಲಿ ಒಂದು ಗೋಲ್ ಆಯಿತು ಕಿರುಚಾಟ ಹಾರಾಟ ಜೋರಾಯಿತು .. ಆದರೆ ಏನನ್ನು ಒದ್ದದ್ದು ಎಂದು ದೂರದಿಂದ ಗೊತ್ತಾಗಲಿಲ್ಲ .. ಕೂಗಿ ಕೇಳಿದೆ ಬಾಲ್ ಎಲ್ಲಿದೆ ಎಂದು .. ಸ್ವಲ್ಪ ದೂರದಿಂದ ಸದ್ದಾಯಿತು ಚೆಂಡು ಚಿಕ್ಕದು ಹತ್ರ ಬಂದ್ರ ಗೋಲು ಬಿಟ್ ಬಿಡಬ್ಯಾಡ ಹೆಂಗಾರ ಮಾಡಿ ತಡಿ ಅಂತಾ ... ನಾನು ಓಕೆ ಓಕೆ ಅಂತಂದೆ .. ಮತ್ತೆ ಆಟ ಶುರುವಾಯಿತು .. ಈಗ ನನ್ನತ್ತ ಓಡುತ್ತಾ , ಬಾಲನ್ನು ಒದೆಯುತ್ತಾ ಪಾಸ್ ಹಾಕಲೇ ಪಾಸ್ ಓದಿಯಲೇ ಅನ್ನೋ ಕಿರುಚಾಟ ಜೋರಾಯಿತು .. ಒಬ್ಬ ಜೋರಾಗಿ ಒದ್ದ ಆ ಬಾಲ್ ನನ್ನ ಹತ್ತಿರ ಬರುವಾಗ ಕ್ಯಾಚ್ ಕ್ಯಾಚ್ ಅಂತಾ ಕೂಗು ಕೇಳಿಸಿದಾಗ ನಾನೂ ಒಂದೆರಡು ಹೆಜ್ಜೆ ಮುಂದಿಟ್ಟು ಅದನ್ನು ಹಿಡಿದು ಮೇಲೆತ್ತಿಕೊಳ್ಳುವಾಗ ನನ್ನೆದೆ ಒಮ್ಮೆಲೇ ಜುಮ್ಮೆಂದು ಮನದೊಳಕೆ ಹೇಳಲಾಗದ ಭಯ .. ಅವರೆಲ್ಲಾ ಮಾತಿನಂತೆ ಅದು ನಿಜಕ್ಕೂ ಚೆಂಡಾಟ .. ಚೆಂಡು ಎಂದರೆ ಗೊಂಬೆಯ ರುಂಡ .. ತಲೆಯಲ್ಲಾ ಗಿರಗಿರನೆ ತಿರುಗಿದಂತಾಗಿ ದೂರಕ್ಕೆ ಎಸೆದು ಇದನ್ನೆಲ್ಲಾ ಆಡಲು ತರಬೇಡಿ ಒಂದು ಹೊಸಾ ಬಾಲ್ ತರಲು ಹೇಳಿದೆ .. ಅದಕ್ಕಾ ರೊಕ್ಕಾ ಬೇಕಲ್ಲಾ ಅಂದಾ ಒಬ್ಬ .. ಅದೇ ಮೊದಲು ರೊಕ್ಕಾ ಅನ್ನೋ ಪದ ಕೇಳಿದ್ದು .. ಏನದು ಹಾಗಂದ್ರೆ ಅಂತಾ ಕೇಳಿದಾಗ ಮತ್ತೊಬ್ಬ ಹೇಳಿದ್ದು ನೀನ್ಯಾವ ಸೀಮ್ಯಾಗಿಂದ ಬಂದಿಯೋ ರೊಕ್ಕಾ ಅಂದ್ರ ತಿಳಿಯಕ್ಕಿಲ್ವಾ ಕಾಸು ಹಣ ಅಂದಾಗ ಓಹೋ ಅದಕ್ಕೆ ರೊಕ್ಕಾ ಅಂತಾರಾ ಇಲ್ಲಿ .. ಸರಿ ಬಾಲಿನ ದುಡ್ಡು (ರೊಕ್ಕಾ) ನಾನು ಕೊಡ್ತೀನಿ ನಾಳೆ ತರೋಣ ಅಂತ್ಹೇಳಿ ಮತ್ತೆ ಗೋಲ್ ಬಳಿ ನಿಂತಾಗ ಒಬ್ಬ ಹುಡುಗಿ ಓಡೋಡಿ ಬಂದು ಸ್ವಲ್ಪ ದೂರದಿಂದ ಕೂಗಿದಳು .. ಆಗ ಇನ್ನಿಬ್ಬರು ಹುಡುಗಿಯರು ಅವಳ ಹಿಂದೆ ಓಡಿ ಬಂದರು .. ಸಮಾಜ ಮೇಷ್ಟ್ರು ಬಂದ್ರು ಬರ್ರಿ ಎಲ್ಲಾ ಅಂತಾ ಕೂಗಿದಾಗ ಜೊತೆಯಲ್ಲೇ ಒಬ್ಬ ಹುಡುಗಿ ನನ್ನ ಚಿನ್ನು ಬೇಬಿ ತಲೆ ಕೊಡ್ರೋ ಅಂದಾಗ ಆ ಗೊಂಬೆಯ ರುಂಡವನ್ನು ಅವಳಿಗೆ ಕೊಟ್ಟರು .. ನನಗಾಗ ಮನದೊಳಗೆ ವಿಚಿತ್ರ ಭಾವನೆಗಳು .. ಒಂದು ರುಂಡದಿಂದ ಫುಟ್ಬಾಲ್ ಆಟವೇ .. ನೆನೆದರೆ ಸಾಕು ಮೈಯೆಲ್ಲಾ ಒಂದು ಕ್ಷಣ ಜುಮ್ಮೆನ್ನುವುದು .. ಬೇರೆ ವಾತವರಣದಲ್ಲಿ ಬೆಳೆದು ಬಂದವರಿಗೆ ಹೊಸ ಜಗತ್ತಿನ ಪರಿಚಯದಲ್ಲಿ ಮೂಡುವ ಭಾವನೆಗಳು ನಡೆಯುವ ಘಟನೆಗಳು ಒಮ್ಮೊಮ್ಮೆ ಭಯ ಒಮ್ಮೊಮ್ಮೆ ಕುತೂಹಲ .. !!
OLD MEMORIES

ಹೀಗೆಯೇ ಇನ್ನೂ ಅನೇಕ ಸಂಗತಿಗಳ ಮಹಾಸಾಗರ .. ಕುತೂಹಲಕಾರಿ ಆ ದಿನಗಳು .. ನನ್ನ ಬಾಲ್ಯದ ಹುಬ್ಬಳ್ಳಿಯ ಸವಿನೆನಪುಗಳು ಮುಂದುವರೆಯುತ್ತದೆ .. ಇಷ್ಟವಿದ್ದಲ್ಲಿ ಕಾದು ನೋಡಿ , ಓದಿ ನಿಮ್ಮ ಅನಿಸಿಕೆಗಳನ್ನು ತಪ್ಪದೇ ತಿಳಿಸಿ .. ಬರೆಯುವ ಆತುರದಲ್ಲಿ ಅಲ್ಲಲ್ಲಿ ಅಕ್ಷರಗಳ ಕಾಗುಣಿತ ಏರುಪೇರು ಆದಲ್ಲಿ ತಿಳಿಸಿ ಮತ್ತು ಅನುಸರಿಸಿಕೊಂಡು ಓದಬೇಕಾಗಿ ಕೇಳಿಕೊಳ್ಳುತ್ತೇನೆ .. !!

(ಕಥೆ ಮುಂದುವರೆಯುವುದು .. )

*ಪಿಪಿಕೆ*

Monday 26 August 2013

ಕಹಿ ಕನಸಿನ ಅನುಭವ ........ !!

ಈ ರಾತ್ರಿ ಕಂಡ ಕನಸು ಕಪ್ಪು ಬಿಳುಪು
ಆದರೂ ಇದ್ದಂತಿತ್ತು ಕೆಂಬಣ್ಣ ಒಂಚೂರು
ಕಥೆಯಾದಲ್ಲಿ ಇಲ್ಲಿರಲಿಲ್ಲ ನಾಯಕಿ
ಅರಿಯದ ಊರಲ್ಲಿ ಉದ್ದುದ್ದ ಗೋಡೆಗಳು

ವಾಹನದಿಂದಿಳಿದೊಡನೆ ನಾಲ್ಕಾರು ಹೆಜ್ಜೆ
ಹಿಂತಿರುಗಿ ನೋಡಲಲ್ಲಿ ನಮ್ಮವರು ಕಣ್ಮರೆ
ಭಯದಲ್ಲಿ ರಸ್ತೆಯತ್ತ ಓಡಿ ಹೋದೊಡನೆ
ಕಂಡರು ನಮ್ಮವರೆಲ್ಲರೂ ವಾಹನದ ಬಳಿ

ಅದೇನೋ ಸಿಕ್ಕಂತೆ ಎದೆಯೊಳಗೆ ತಳಮಳ
ಮುಂದೆ ಹೋಗೆಂದ ಅಮ್ಮನ ಮಾತಿಗೆ ಒಪ್ಪಿ
ತಿರುಗಿ ಹೋಗುತ್ತಿದ್ದಾಗ ಅಪ್ಪ ಕೂಗಿದಂತಾಗಿ
ಪುನಃ ಹಿಂತಿರುಗಿ ನೋಡಲಲ್ಲಿ ಯಾರೂ ಇಲ್ಲ

ಆ ಸ್ಥಳವ್ಯಾವುದೋ ಈ ಮೊದಲು ಕಂಡಿರಲಿಲ್ಲ
ಜೊತೆಗೊಂದು ವಿಸ್ಮಯ ಈಗಲ್ಲಿ ವಾಹನವೂ ಇಲ್ಲ
ಮತ್ತಷ್ಟು ಭಯದಲ್ಲಿ ಮತ್ತೆ ಓಡಿದೆ ರಸ್ತೆಯ ಬಳಿ
ಕಂಡರು ಎಲ್ಲರೂ ವಾಹನದ ಬಳಿ ನಗುನಗುತ

ನಾಲ್ಕಾರು ಹೆಜ್ಜೆ ನಡೆದೊಡನೆ ಕಣ್ಮರೆಯಾಗುವ
ಮರಳಿ ಬಂದೊಡನೆ ಕಣ್ಮುಂದೆ ಕಾಣುವ ಆ ಸ್ಥಳ
ಯಾವುದೆಂಬ ಕುತೂಹಲದ ಜೊತೆಯಲ್ಲಿ ಭಯ
ಸಿಹಿ ಕನಸುಗಳ ಬದಲು ಕಹಿ ಕನಸಿನ ಅನುಭವ  ........ !!

*ಪಿಪಿಕೆ*

----------------------------------------------------------------------
(ಕನಸಲ್ಲಿ ಕಂಡದ್ದು .. ಒಪ್ಪಿಗೆಯಾಗುವ ಚಿತ್ರ ಸಿಗದ ಕಾರಣ ಇಲ್ಲಿ ಚಿತ್ರವಿಲ್ಲ ... )

Sunday 25 August 2013

ಅನಾಥರು ..... !!

ಎ ಸೈಲೆಂಟ್ ಲವ್ ಸ್ಟೋರಿ





ನಾನು ಪ್ರಶಾಂತ
ಆಕೆಯೂ ಶಾಂತ
ಮೆಚ್ಚಿರಲು ಮನ
ಪ್ರೀತಿಯ ಜನನ.... !!

ಏಕಾಂತ ಪ್ರಿಯ ನಾನು
ಸ್ವಭಾವದಲ್ಲಿ ಮೌನಿ
ಅವಳೂ ಕೂಡ ನನ್ನಂತೆ
ಸ್ವಭಾವದಲ್ಲಿ ಸೌಮ್ಯ.... !!

ಮಾತಿಗೆ ಮಾತು ಬೆಳಯಲಿಲ್ಲ
ಹುಟ್ಟಿದ ಪ್ರೀತಿಯೂ ಬೆಳೆಯಲಿಲ್ಲ
ಮಾತಿಲ್ಲವೆಂದು ನೋವಿರಲಿಲ್ಲ
ಆದರೂ ಪ್ರೀತಿಯು ಸತ್ತಿರಲಿಲ್ಲ.... !!

ಕೊನೆ ಮಾತು ಇಬ್ಬರಿಂದಲೂ
ಮದುವೆಯ ಶುಭಾಶಯಗಳು
ದಿನವಿಲ್ಲಿ ಅದಲು ಬದಲು
ಅಂತೆಯೇ ಗಂಡು ಹೆಣ್ಣುಗಳು..... !!

ನಾಲ್ವರೂ ಈಗ ಪ್ರೀತಿ ಇಲ್ಲದೇ .... 

ಅನಾಥರು ..... !!


*ಪಿಪಿಕೆ*

ಅದು ಅಪರಿಚಿತ.... !!



ಎರಡು ನಿಮಿಷಗಳ ಮೌನ
ಕಾಳಗದಲ್ಲಿ ಮಡಿದ ಸೇವಕನಿಗಾಗಿ
ಎರಡು ದಿನಗಳ ರಜಾ
ಐಶಾರಾಮಿ ಬದುಕಿನ ನಾಯಕನಿಗಾಗಿ.... !!

ಎಲ್ಲೋ ಏನೋ ಹುಡುಕಲು ಹೋಗಿ
ಸಿಗಲಿಲ್ಲವಾದರೂ ಬದುಕು ಸಾಗಬೇಕು
ಎಲ್ಲೋ ನಡೆದ ಸುದ್ಧಿ ಕೇಳಿ ಭಯವಾಗಿ
ಸಿಕ್ಕರೂ ಸ್ವಾತಂತ್ರ್ಯ, ಮತ್ತೆ ಹೋರಾಡಬೇಕು... !!

ಹೇಳಲು ನಾವು ಭಾರತೀಯರೆಂಬ ಮಾತು
ರಾಜ್ಯ ದಾಟಿದೊಡನೆಯೇ ಬರಬಹುದು ಆಪತ್ತು
ಹುಟ್ಟಿನಿಂದಲೇ ಸಂಬಂಧಗಳ ಸರಪಳಿ ಬಿಗಿತ
ಹೊರ ಜಗತ್ತು ನಮ್ಮದಾದರೂ ಅದು ಅಪರಿಚಿತ.... !!

*ಪಿಪಿಕೆ*

Sunday 18 August 2013

ಹಳ್ಳಿಯ ಹುಡುಗಿಯ





ಹಳ್ಳಿಯ ಹುಡುಗಿಯ
ಮೆಲ್ಲನೆ ನಡಿಗೆಯ
ನೋಡುತ್ತ ನಾ ನಿಂತೆ
ಆದರೆ
ಮನದಲ್ಲಿ ಬೇರೇನೋ ಚಿಂತೆ

ಹೊಲವೆಲ್ಲಾ ಹಸಿರು
ಕಾಲುದಾರಿ ಕೆಸರು
ಕಲ್ಲುಮುಳ್ಳು ಒಂಚೂರು
ಹೆಜ್ಜೆ ಹೆಜ್ಜೆಗೂ ಹುಷಾರು

ಹತ್ತಾರು ಯೋಜನೆಗಳು
ಹಲವಾರು ಮಂತ್ರಿಗಳು
ಹಾಳೆಯ ಲೆಕ್ಕದ ರಸ್ತೆಗಳು
ಹುಟ್ಟಲು ಕಾದಿವೆ ಹಗಲಿರುಳು

ಏನೇನೋ ನೆನೆಯುತ್ತ
ಮತ್ತೊಮ್ಮೆ ಅವಳತ್ತ
ಏರಿಳಿತ ಎದೆ ಬಡಿತ 
ಪ್ರೀತಿಯ ತಕದಿಮಿತ 

ಹಳ್ಳಿಯ ಹುಡುಗಿಯ
ಮೆಲ್ಲನೆ ನಡಿಗೆಯ 
ನೋಡುತ್ತ ನಾ ನಿಂತೆ
ಆದರೆ
ಮನದಲ್ಲಿ ಬೇರೇನೋ ಚಿಂತೆ.... !!

*ಪಿಪಿಕೆ*